ಶುಕ್ರವಾರ, ಆಗಸ್ಟ್ 11, 2017

ಶ್ರೀ ರಂಗಪಟ್ಟಣ ಚರಿತೆ ಹಾಗು ಗೌತಮ ಕ್ಷೇತ್ರ. ಪೌರಾಣಿಕ ಹಿನ್ನೆಲೆ!!!ನಾವರಿಯದ ಮಾಹಿತಿ.!!!! ಪಯಣ ..2

ಗೌತಮ ಕ್ಷೇತ್ರ  [  ಚಿತ್ರ ಸೌಜನ್ಯ  ಗೂಗಲ್ ಮ್ಯಾಪ್ ] 


ಶ್ರೀ ರಂಗ ಪಟ್ಟಣ ದ್ವೀಪಕ್ಕೆ ಸಂಭಂದಿಸಿದಂತೆ ಹಲವಾರು ದಂತ ಕತೆಗಳಿದ್ದು ಎಲ್ಲಾ ಕಥೆಗಳಿಗೆ ಇಂದಿನ ನಾವುಗಳು ಬಯಸುವಂತೆ ದಾಖಲೆಗಳ ಆಧಾರ ವಿಲ್ಲ ಆದಾಗ್ಯೂ ಕಥೆಗಳಿಗೆ ಆಧಾರವಾಗಿ ಎಂಬಂತೆ ಕೆಲವು ಕುರುಹುಗಳು ಹಾಗೂ ಪ್ರಾಚ್ಯ ವಸ್ತು/ದಾಖಲೆ ಸಂಗ್ರಹಾಲಯ ದಲ್ಲಿ ಕೆಲವು ದಾಖಲೆಗಳು ಕಂಡುಬರುತ್ತದೆ. ಈ ಬಗ್ಗೆ ಹೆಚ್ಚಿನ ಸಂಶೋದನೆ ಮಾಡುವ ಅಗತ್ಯ ವಿದ್ದು ನಮ್ಮಲ್ಲಿ ಇಂತಹ ವಿಚಾರಗಳಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದ ಕಾರಣ ಲಭ್ಯವಿರುವ ಮಾಹಿತಿಯನ್ನು ಇಲ್ಲಿ ಉಲ್ಲೇಖಿಸಿದ್ದೇನೆ.ಶ್ರೀ ರಂಗಪಟ್ಟಣ ದ್ವೀಪವನ್ನು "ಗೌತಮಕ್ಷೇತ್ರ" ವೆಂದೂ "ಗೌತಮ ರಂಗನಾಥ ಸನ್ನಿಧಿ" ಎಂದೂ ಕರೆಯುವುದು ವಾಡಿಕೆ .ಇದು ಹಿಂದಿನ ಹಲವು ಶತಮಾನಗಳಿಂದ ಬೆಳೆದು ಬಂದಿದೆ.ಇದಕ್ಕೆ ಪುಷ್ಟಿ ಕೊಡಲೇನೋ ಎಂಬಂತೆ ಶ್ರೀ ರಂಗನಾಥನ ಸನ್ನಿಧಿ ಯಲ್ಲಿ ಗೌತಮ ಋಷಿಗಳ ಮೂರ್ತಿಯೂ ಸಹ ಇದೆ


ದಾಖಲೆ  


ಶ್ರೀ ರಂಗಪಟ್ಟಣ ದ್ವೀಪದ ಪಶ್ಚಿಮಕ್ಕೆ ಕಾವೇರಿ ಮಡಿಲಲ್ಲಿ ಗೌತಮ ಕ್ಷೇತ್ರ ಎಂಬ ಹೆಸರಿನ ಮತ್ತೊಂದು ದ್ವೀಪ ವಿದೆ. ಅಲ್ಲಿ ಗೌತಮ ಮುನಿಗಳು ತಪ್ಪಸ್ಸು ಮಾಡಿದರೆಂದೂ ಹೇಳುವ ಜಾಗದಲ್ಲಿ ಒಂದು ಮಂದಿರವಿದ್ದು ಅಲ್ಲಿ ಹಲವಾರು ಮುನಿಗಳ ಮೂರ್ತಿಗಳನ್ನು ಸ್ಥಾಪಿಸಲಾಗಿದೆ .ಬಿ.ಎಲ್. ರೈಸ್ ರವರ ಎಪಿಗ್ರಾಫಿಯ ದಲ್ಲಿ ಈ ಬಗ್ಗೆ ಉಲ್ಲೇಖವಿದ್ದು ಈ ಮಂಟಪದ ಒಂದು ಬಂಡೆಯ ಮೇಲೆ ಈ
"ಗೌತಮ ಮುನಿಯಿ....... ಹ......ತೀರ್ತ ಎಂದೂ ಪಶ್ಚಿಮ ರಂಗನಾಥನ ಸಾಯುಜ್ಯವಹುದು"
ಎಂದು ಬರೆಯಲಾಗಿದೆ.ದೇವಾಲಯದ .ಅಂದರೆ ಶ್ರೀ ರಂಗನಾಥನ ದೇವಾಲಯದ ಉತ್ತರ ಗೋಡೆಯ ಕಲ್ಲಿನಲ್ಲಿನ ಒಂದು ಶಾಸನದಲ್ಲಿ
"ಕಾವೇರಿ ವನ ಮಧ್ಯ ದೇಶೆ ವಿಲ [ಸ ].ತ್ ಶ್ರೀ ರಂಗ ಪಟ್ಟಣಾ ಭಿದೇ. ವೈಕುಂಟೆ ಮುನಿ ಗೌತಮಸ್ಯ ತಪಸಾ ಹೃಷ್ಟಹ ಪುರಾಣಹ ಪುಮಾನ್"
ಎಂದು ಹೇಳಿ ಗೌತಮ ಋಷಿಯ ತಪಸನ್ನು ಸ್ಮರಿಸಲಾಗಿದೆ ಹಾಗು ಶ್ರೀ ರಂಗನಾಥನಿಗೂ ಹಾಗೂ ಗೌತಮ ಋಷಿಗೂ ಇರುವ ಸಂಬಂಧ ತಿಳಿಸಲಾಗಿದೆ.ಇದು ಗೌತಮ ಹಾಗೂ ಶ್ರೀ ರಂಗ ಪಟ್ಟಣದ ಕ್ಷೇತ್ರ ವಿಷಯವಾದರೆ.ಮುಂದುವರೆದು ಇನ್ನೊಂದು ಕಥೆ ನೋಡಿ!!!
ಇನ್ನೊಂದು ವಿಚಾರ ಶ್ರೀ ರಂಗ ಪಟ್ಟಣ ದ ಚರಿತೆಯದು ಈ ದಾಖಲೆಯಲ್ಲಿ ಶ್ರೀ ರಂಗ ಪಟ್ಟಣ ದ್ವೀಪ ಸಮುಚ್ಚಯ ಮೂರು ಹಳ್ಳಿ ಗಳಿಂದ ಕೂಡಿತ್ತೆಂದೂ ಹಂಗರಹಳ್ಳಿ, ಹೊಸಳ್ಳಿ ಹಾಗೂ ಧ್ರುವ ಎಂಬ ಮೂರು ಹಳ್ಳಿ ಗಳು ಸೇರಿದ್ದವೆಂದೂ ಒಂದು ದಿನ ಹಂಗರ ಹಳ್ಳಿಯ ಒಬ್ಬ ಹೆಂಗಸಿಗೆ ಸೇರಿದ ಹಸು ತನ್ನ ಹಾಲನ್ನು ಕಾಡಿನಲ್ಲಿದ್ದ ಒಂದು ಹುತ್ತಕ್ಕೆ ಧಾರೆ ಹರಿಸಿದ ಕಾರಣ ಆ ಜಾಗದಲ್ಲಿ ಅಗೆದಾಗ ಶ್ರೀ ರಂಗ ನಾಥನ ಮೂರ್ತಿ ಹೊರ ಬಂದಿತೆಂದೂ ಹೇಳಲಾಗಿದೆ, ನಂತರ ಹಸುವಿನ ಒಡತಿ ಈ ಮೂರ್ತಿಗೆ ಮರದಿಂದ ಒಂದು ಆಕೃತಿ ನಿರ್ಮಿಸಿ ಸೂರು ಕಲ್ಪಿಸಿದಳೆಂದು ತಿಳಿಸಲಾಗಿದೆ.. ಇದಕ್ಕೆ ಆಧಾರವಾಗಿ ಪ್ರಹ್ಲಾದ ಚರಿತೆ ಯನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ದಾಖಲೆ ಚಿತ್ರವನ್ನು ಕೆಳಗಡೆ ನೋಡಬಹುದಾಗಿದೆ.ಶ್ರೀ ರಂಗ ಪಟ್ಟಣ ಚರಿತೆ ಬಗ್ಗೆ ದಾಖಲೆ 


ಮೊದಲಿಗೆ ಶ್ರೀ ರಂಗನಾಥನ ದೇವಾಲಯ ದ ನಿರ್ಮಾಣ ಗಂಗರ ಕಾಲದಲ್ಲಿ ಕ್ರಿ.ಶ 894 ರಲ್ಲಿ ಗಂಗರಸರ ಪ್ರಧಾನಿ ತಿರುಮಲಯ್ಯ ಎಂಬುವರು ಈ ದೇವಾಲಯ ನಿರ್ಮಾಣ ಮಾಡಿಸಿದರೆಂದು ತಿಳಿದುಬರುತ್ತದೆ.ನಂತರ ಕ್ರಿ.ಶ .1120 ರಲ್ಲಿ ಹೊಯ್ಸಳ ಸಾಮ್ರಾಜ್ಯದ ವಿಷ್ಣುವರ್ಧನ ನ ತಮ್ಮ ಉದಯಾದಿತ್ಯ ರ ಕಾಲದಲ್ಲಿ ಶ್ರೀ ರಂಗನಾಥ ದೇವಾಲಯ ಮತ್ತಷ್ಟು ಅಭಿವೃದ್ದಿ ಕಂಡಿದೆ, ಹಾಗು ಶ್ರೀ ರಂಗಪಟ್ಟಣ ಊರೂ ಸಹ ಕೀರ್ತಿ ಗಳಿಸಿ ಅಭಿವೃದ್ದಿ ಹೊಂದಿದೆ. ಕಾವೇರಿ ನದಿಯ ದಡ ದಲ್ಲಿ ಅಷ್ಟಗ್ರಾಮಗಳ ಅನಾವರಣ ಈ ಅವಧಿಯಲ್ಲಿ ಆಯಿತೆಂದು ತಿಳಿದು ಬರುತ್ತದೆ.ನಂತರ ವಿಜಯ ನಗರ ಅರಸರ ಪ್ರತಿನಿಧಿ ಹಾಗೂ ನಾಗಮಂಗಲ ದ ದಂಡ ನಾಯಕ ತಿಮ್ಮಣ್ಣ ರು ಕ್ರಿ.ಶ . 1454 ರಲ್ಲಿ ವಿಜಯ ನಗರ ಅರಸರ ಅನುಮತಿ ಪಡೆದು ಶ್ರೀ ರಂಗಪಟ್ಟಣದಲ್ಲಿ ಕೋಟೆ ಕಟ್ಟಿಸಿದರೆಂದೂ ಹಾಗೂ ಶ್ರೀ ರಂಗ ನಾಥ ದೇವಾಲಯವನ್ನು ಅಭಿವೃದ್ದಿ ಪಡಿಸಿ ಮತ್ತಷ್ಟು ವಿಸ್ತರಿಸಿದರೆಂದೂ ದಾಖಲೆಗಳು ಹೇಳುತ್ತವೆ. ಇವನ ನಂತರ ಬಂದ ಶ್ರೀ ರಂಗರಾಯರೂ ಸಹ ವಿಜಯ ನಗರದ ಪ್ರತಿನಿಧಿ ಯಾಗಿ ಆಳ್ವಿಕೆ ನಡೆಸಿ ಆ ನಂತರ ಕ್ರಿ.ಶ . 1610 ರಲ್ಲಿ ರಾಜ ವೊಡೆಯರ್ ಶ್ರೀ ರಂಗ ಪಟ್ಟಣವನ್ನು ತಮ್ಮ ಆಳ್ವಿಕೆಗೆ ಒಳಪಡಿಸಿಕೊಂಡು ಮೈಸೂರು ಸಂಸ್ತಾನದ ರಾಜಧಾನಿಯಾಗಿ ಶ್ರೀ ರಂಗಪಟ್ಟಣ ವನ್ನು ಘೋಷಿಸಿ ಇಲ್ಲಿಯೇ ನೆಲೆ ನಿಂತರು , ನಂತರ ಚಾಮರಾಜ ವೊಡೆಯರ್ v [೧೬೧೭-೧೬೩೭,], ಇಮ್ಮಡಿ ರಾಜ ವೊಡೆಯರ್ [೧೬೩೭-೧೬೩೮], ಕಂಟೀರವ ನರಸರಾಜ ವೊಡೆಯರ್ 1 ,[೧೬೩೮-೧೬೫೯],ದೇವರಾಜ ವೊಡೆಯರ್ [ ೧೬೫೯-೧೬೭೩] , ಚಿಕ್ಕ ದೇವರಾಜ ವೊಡೆಯರ್ [೧೬೭೩-೧೭೦೪],ನಂಜರಾಜ ವೊಡೆಯರ್ [೧೭೬೬-೧೭೭೦ ],ಬೆಟ್ಟದ ಚಾಮರಾಜ ವೊಡೆಯರ್ v11 {೧೭೭೦-೧೭೭೬] ನಂತರ ಖಾಸಾ ಚಾಮರಾಜ ವೊಡೆಯರ್ V111 ರ ಪ್ರತಿನಿದಿಯಾಗಿ ಹೈದರ್ ಅಲಿ ,ಆನಂತರ ಟಿಪ್ಪೂ ಸುಲ್ತಾನ್ ಆಳ್ವಿಕೆ ನಡೆಸಿ ಕ್ರಿ .ಶ.1799 ರ ಮೈಸೂರಿನ ಅಂತಿಮ ಯುದ್ದದ ಸೋಲಿನ ನಂತರ ಶ್ರೀ ರಂಗ ಪಟ್ಟಣ ದ ಒಂದು ಸುವರ್ಣ ಅಧ್ಯಾಯ ಮುಗಿದಿತ್ತು. ಇಂದು ಕರ್ನಾಟಕ ರಾಜ್ಯದ ಮಂಡ್ಯಾ ಜಿಲ್ಲೆ ಯಲ್ಲಿನ ಒಂದು ಸಣ್ಣ ತಾಲೂಕು ಆಗಿ ಗತ ಇತಿಹಾಸದ ಸ್ಮಾರಕಗಳ ಬೀಡಾಗಿ ಪ್ರವಾಸಿಗಳನ್ನು ಕೈಬೀಸಿ ಕರೆದಿದೆ. ಶ್ರೀ ರಂಗನಾಥ  ಸ್ವಾಮಿಯ  ದೇವಾಲಯದ   ದರ್ಶನಕ್ಕೆ  ಮೊದಲು ಸ್ವಲ್ಪ ವಿಶ್ರಾಂತಿ ಪಡೆಯಿರಿ.    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀ ರಂಗಪಟ್ಟಣ ಚರಿತೆ ಹಾಗು ಗೌತಮ ಕ್ಷೇತ್ರ. ಪೌರಾಣಿಕ ಹಿನ್ನೆಲೆ!!!ನಾವರಿಯದ ಮಾಹಿತಿ.!!!! ಪಯಣ ..2

ಗೌತಮ ಕ್ಷೇತ್ರ  [  ಚಿತ್ರ ಸೌಜನ್ಯ  ಗೂಗಲ್ ಮ್ಯಾಪ್ ]  ಶ್ರೀ ರಂಗ ಪಟ್ಟಣ ದ್ವೀಪಕ್ಕೆ ಸಂಭಂದಿಸಿದಂತೆ ಹಲವಾರು ದಂತ ಕತೆಗಳಿದ್ದು ಎಲ್ಲಾ ಕಥೆಗಳಿಗೆ ಇಂದಿನ ನಾ...